ಅನೈತಿಕ ಸಂಬಂಧ: ಪತ್ನಿ ಕೊಂದು ಪತಿ ಆತ್ಮಹತ್ಯೆ ಮೀನಾ ಅಕ್ರಮ ಸಂಬಂಧ ಹೊಂದಿದ್ದು, ಈ ವಿಚಾರ ತಿಳಿದ ಕುಮಾರ್ ಹಲವು ಬಾರಿ ಪತ್ನಿಗೆ ಬುದ್ಧಿ ಹೇಳಿದ್ದಾನೆ. ಅಲ್ಲದೆ, ಆಕೆಯ ಕುಟುಂಬಕ್ಕೂ ವಿಚಾರ ತಿಳಿಸಿದ್ದರು. ಆದರೂ, ಮೀನಾ ತನ್ನ ಅಕ್ರಮ ಸಂಬಂಧ ಮುಂದುವರೆಸಿದ್ದಳು. ಬೆಂಗಳೂರು: ಪತ್ನಿಯ ಅಕ್ರಮ ಸಂಬಂಧಕ್ಕೆ ಮನನೊಂದ ಪತಿಯೊಬ್ಬ ಆಕೆಯನ್ನು ಹತ್ಯೆ ಮಾಡಿ, ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಹತ್ಯೆಯಾದ ಮಹಿಳೆಯನ್ನು ಕೋಲಾರ ಮೂಲದ ಮೀನಾ (36) ಎಂದು ಗುರ್ತಿಸಲಾಗಿದ್ದು, ಹತ್ಯೆ ಮಾಡಿದ ಪತಿಯನ್ನು ಮುಂಬೈ ಮೂಲದ ಕ್ರೇನ್ ಆಪರೇಟರ್ ಮಹೇಶ್ ಕುಮಾರ್ (46) ಎಂದು ಗುರುತಿಸಲಾಗಿದೆ.ದಂಪತಿ ಹುಳಿಮಾವು ದೊಡ್ಡಕಮ್ಮನಹಳ್ಳಿಯಲ್ಲಿ ವಾಸವಿದ್ದು, ಇವರಿಗೆ ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನಿದ್ದು, ಮದುವೆಯಾಗಿ 15 ವರ್ಷಗಳಾಗಿತ್ತು. ಮೀನಾ ಅವರಿಗೆ ಕುಮಾರ್ 2ನೇ ಪತಿಯಾಗಿದ್ದರು ಎಂದು ತಿಳಿದುಬಂದಿದೆ.ಮೀನಾ ಅಕ್ರಮ ಸಂಬಂಧ ಹೊಂದಿದ್ದು, ಈ ವಿಚಾರ ತಿಳಿದ ಕುಮಾರ್ ಹಲವು ಬಾರಿ ಪತ್ನಿಗೆ ಬುದ್ಧಿ ಹೇಳಿದ್ದಾನೆ. ಅಲ್ಲದೆ, ಆಕೆಯ ಕುಟುಂಬಕ್ಕೂ ವಿಚಾರ ತಿಳಿಸಿದ್ದರು. ಆದರೂ, ಮೀನಾ ತನ್ನ ಅಕ್ರಮ ಸಂಬಂಧ ಮುಂದುವರೆಸಿದ್ದಳು. ಇದರಿಂದ ಮನನೊಂದ ಕುಮಾರ್ ಅವರು ಆಗಸ್ಟ್ 16ರ ರಾತ್ರಿ 7.30 ರ ಸುಮಾರಿಗೆ ಕಬ್ಬಿಣದ ರಾಡ್‌ನಿಂದ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ತಲೆಗೆ ಪೆಟ್ಟಾಗಿ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.ತಾಯಿ ಶವ ಕಂಡ ಪುತ್ರ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದಾಗ ಪತಿ ಕುಮಾರ್ ಹತ್ಯೆ ಮಾಡಿರಬಹುದು ಎಂದು ಶಂಕಿಸಿದ್ದಾರೆ. ನಂತರ ಆತನ ಪತ್ತೆಗೆ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ವೇಳೆ ಶನಿವಾರ ಮಧ್ಯಾಹ್ನ 3.30ರ ಸುಮಾರಿಗೆ ದೊಡ್ಡಕಮ್ಮನಹಳ್ಳಿ ಬಳಿಯ ನಿರ್ಜನ ಪ್ರದೇಶದಲ್ಲಿ ಕುಮಾರ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದೀಗ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.